ಏಚಲದೇವಿ: ಕನ್ನಡನಾಡಿನ ಇತಿಹಾಸದಲ್ಲಿ ಈ ಹೆಸರಿನ ಮೂವರು ಕಾಣಸಿಗುತ್ತಾರೆ. ಹೊಯ್ಸಳ ಇಮ್ಮಡಿ ವಿನಯಾದಿತ್ಯನ ಮಗನಾದ ಎರೆಯಂಗನ (ನೋಡಿ- ಎರೆಯಂಗ) ಮೊದಲನೆಯ ಹೆಂಡತಿ ಏಚಲದೇವಿ ಈ ಮೂವರ ಪೈಕಿ ಒಬ್ಬಳು. ಈಕೆ ಎಡತೊರೆಮಂಡಲದಲ್ಲಿ (ಈಗಿನ ಹೆರಗೆ ಗ್ರಾಮದ ಸುತ್ತಲಿನ ಪ್ರದೇಶ) ಆಳುತ್ತಿದ್ದ ಸಾಮಂತ ಪ್ರಭು ಗಂಗ ಮನೆತನದ ಹೆರ್ಮಾಡಿದೇವನ ಮಗಳು. ಈಕೆಯ ಗಂಡ, ಯುವರಾಜ ಎರೆಯಂಗ 1067ರಿಂದ 1100ರ ವರೆಗೆ ತಂದೆಗೆ ಸಹಾಯಕನಾಗಿ ರಾಜ್ಯಭಾರದಲ್ಲಿ ಪಾತ್ರ ವಹಿಸುತ್ತಿದ್ದನೆಂದೂ ಬಹುಶಃ 
ತಂದೆಗಿಂತ ಮೊದಲೇ ತೀರಿಕೊಂಡನೆಂದೂ ಒಂದು ಅಭಿಪ್ರಾಯವಿದೆ. ಈತನ ತಂದೆ 1067ರಲ್ಲೋ ಅದರ ಮರುವರ್ಷವೋ ಕಾಲವಾದನೆಂದೂ ಆಮೇಲೆ ಎರೆಯಂಗ ಸ್ವಲ್ಪ ಕಾಲ ರಾಜ್ಯವಾಳಿದನೆಂದೂ ಇನ್ನೊಂದು ಮತ. ಎರೆಯಂಗ ಮತ್ತು ಏಚಲದೇವಿಯರ ಗಂಡು ಮಕ್ಕಳು ಮೂವರು: ಒಂದನೆಯ ಬಲ್ಲಾಳ, ವಿಷ್ಣುವರ್ಧನ ಮತ್ತು ಉದಯಾದಿತ್ಯ. ಕೊನೆಯವನಾದ ಉದಯಾದಿತ್ಯನಿಗೆ ಏಚಲದೇವಿ ಎಂಬ ಹೆಸರಿನ ಮಗಳೊಬ್ಬಳಿದ್ದಳು.

ವಿಷ್ಣುವರ್ಧನನ ಮಗನಾದ ಒಂದನೆಯ ನರಸಿಂಹನ (1143-73) ರಾಣಿಯ ಹೆಸರೂ ಏಚಲದೇವಿಯೇ. ಮಹದೇವಿ ಎಂಬುದು ಇವಳ ರೂಢನಾಮ, ಈಕೆಯನ್ನು ರೂಪಗುಣಸಂಪನ್ನೆಯೆಂದು ಹಲವು ಶಾಸನಗಳಲ್ಲಿ ವರ್ಣಿಸಲಾಗಿದೆ. ಗಂಡನೊಡನೆ ಈಕೆಯೂ ರಾಜ್ಯಭಾರ ಮಾಡುತ್ತಿದ್ದಳು (1168-69). ಹೊಯ್ಸಳ ರಾಜರಲ್ಲಿ ಅತ್ಯಂತ ಪ್ರಸಿದ್ಧನಾದ ಇಮ್ಮಡಿ ವೀರಬಲ್ಲಾಳ ಈಕೆಯ ಮಗ.             (ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ